WELCOME TO S.S.B.A.U.P.S.AILA BLOG



Thursday, 2 October 2014

ಗಾಂಧೀಜಿ ಕಂಡ ಭಾರತಮಾತೆ

ಬೋಧ ಕಥೆ 


ಗಾಂಧೀಜಿ ಕಂಡ ಭಾರತಮಾತೆ


ಡಿಸೆಂಬರ್ 1924 ಬೆಳಗಾವಿಯಲ್ಲಿ ಕಾಂಗ್ರೆಸ್ಸಿನ ರಾಷ್ಟ್ರೀಯ ಅಧಿವೇಶನ. ಗಾಂಧೀಜಿಯವರ ಅಧ್ಯಕ್ಷತೆಯಲ್ಲಿ ನಡೆದ ಒಂದೇ ಒಂದು ಅಧಿವೇಶನ ಅದು. ರಾಜಕೀಯ ಚರ್ಚೆಗಳೊಡನೆ ಸಂಗೀತ ನಾಟಕಗಳೂ ಅಲ್ಲಿದ್ದವು. ಭಾರತಮಾತಾ ಎಂಬ ನಾಟಕವೊಂದು ಅಲ್ಲಿ ಪ್ರದರ್ಶನಗೊಳ್ಳುವುದಿತ್ತು. ಅದರಲ್ಲಿ  ಹುಬ್ಬಳಿಯ 13 ವರ್ಷದ ಹುಡುಗಿಯೊಬಳ್ಳದು ಭಾರತಮಾತೆಯ ಪಾತ್ರ. ಆಕೆಯ ಅಧ್ಯಾಪಕಿ ಬರೆದು ಕಲಿಸಿದ ನಾಟಕ ಅದು. 
 ನಾಟಕ ಆಡುವ ಮಕ್ಕಳು, ಆಡಿಸುವ ಆ ಅಧ್ಯಾಪಕಿ-ಎಲ್ಲರಲ್ಲೂ ಒಂದು ರೀತಿಯ ಭಯಮಿಶ್ರಿತ ಆನಂದ. ನಾಟಕ ನೋಡಿ ಗಾಂಧೀಜಿಯವರು ಏನೆಂದಾರು ಎಂಬ ಭಯ ಒಂದೆಡೆ. ಸ್ವತಃ ಗಾಂಧೀಜಿಯ ಎದುರೇ ನಾಟಕ ಆಡುವ ಉತ್ಸಾಹ – ಸಂಭ್ರಮ ಇನ್ನೊಂದೆಡೆ.
 ಆ ನಾಟಕದ ಕಥಾವಸ್ತು ಗಾಂಧೀಜಿಯವರಿಗೇ ಸಂಬಂಧಿಸಿದ್ದಾಗಿತ್ತು. ದಕ್ಷಿಣ ಆಫ್ರಿಕೆಯಿಂದ ಗಾಂಧೀಜಿ ಭಾರತಕ್ಕೆ ವಾಪಸಾಗುತ್ತಿದ್ದಾಗ ಓರ್ವ ಹೆಂಗಸು ಎದುರಾದಳು.  ಆಕೆಯ ದೀನ ಮುಖವನ್ನು ಕಂಡು ಗಾಂಧೀಜಿ ಆಕೆಯ  ಕಷ್ಟಗಳನ್ನು ವಿಚಾರಿಸಿದರು.  ಆಕೆ ಅಳುತ್ತಲೇ ಕೋಟ್ಯಂತರ ಮಕ್ಕಳನ್ನು ಹೆತ್ತ ನನ್ನ ಗೋಳನ್ನು ಕೇಳುವವರೇ ಇಲ್ಲ.  ವಿದೇಶೀಯರು ನನ್ನನ್ನು ದಾಸಿಯನ್ನಾಗಿ ಮಾಡಿದ್ದಾರೆ.  ಮಗೂ, ನನ್ನ ದಾಸ್ಯದ ನೊಗವನ್ನು ಕಿತ್ತೆಸೆಯುವೆಯಾ? ಎನ್ನುತಾಳೆ. ಆಕೆಯ ಮಾತು ಕೇಳಿ ಗಾಂಧೀಜಿಗೆ ಕಣ್ಣಂಚಿನಲ್ಲಿ ನೀರು ಬಂತು. ಆಕೆ ಬೇರಾರು ಅಲ್ಲ, ಭಾರತಮಾತೆ ಎಂದು ತಕ್ಷಣ ಗ್ರಹಿಸಿದ ಗಾಂಧೀಜಿ ಅಮ್ಮಾ, ನಿನ್ನ ಕೋರಿಕೆಯನ್ನು ನಾನು ಈಢೇರಿಸುವೆ ಎಂದು ಭಾಷೆ ಕೊಡುತ್ತಾರೆ. ಇದೇ ಆ ನಾಟಕದ ಕಥಾವಸ್ತು. ಅಭಿನಯವೂ ಚೆನ್ನಾಗಿತ್ತು.  ಎಲ್ಲರಿಗೂ ನಾಟಕ ಮೆಚ್ಚುಗೆಯಾಯಿತು.
 ನಾಟಕ ಮುಗಿಯಿತು. ಕಲಾವಿದರೆಲ್ಲಾ ಗಾಂಧೀಜಿಯವರ ಆಶೀರ್ವಾದ ಪಡೆಯಲು ಬಂದರು. ಭಾರತಮಾತೆಯ ಪಾತ್ರಧಾರಿ ಬಾಲಕಿ ಪದ್ಮಾವತಿ ಗಾಂಧೀಜಿಯ ಕಾಲಿಗೆರಗುವಷ್ಟರಲ್ಲಿ ತಕ್ಷಣ ಮೇಲೆತ್ತಿದ  ಅವರು ಆಕೆಗೇ ನಮಸ್ಕರಿಸಿದರು. ಅಮ್ಮಾ, ನೀನೇ ಭಾರತಮಾತೆ, ನಾಟಕದಲ್ಲಿ ಕೊಟ್ಟ ಭಾಷೆಯಂತೆ ನಡೆಯುತ್ತೇನೆ ಎಂದು ಭಾವುಕರಾಗಿ ನುಡಿದರು. ಎಲ್ಲರೂ ಅಚ್ಚರಿಯಿಂದ ನೋಡುತ್ತಿದ್ದರು. ಯಾರ ಬಾಯಲ್ಲೂ ಮಾತೇ ಹೊರಡಲಿಲ್ಲ.
 ಭಾರತಮಾತೆಯ ವೇಷದ ಬಾಲಕಿಯಲ್ಲಿ ಗಾಂಧೀಜಿ ಸಾಕ್ಷಾತ್ ಭಾರತಮಾತೆಯನ್ನೇ ಕಂಡಿದ್ದರು!

No comments:

Post a Comment