ಶಾಸ್ತ್ರಿ ಅವರನ್ನು ಮರೆಯದಿರೋಣ !
ಅಕ್ಟೋಬರ್ 2 ಅವರ ಜನ್ಮದಿನವೂ ಹೌದು.60ರ ದಶಕದ ಆರಂಭದಲ್ಲಿ ಚೀನ ದೇಶದ ಕೈಯಲ್ಲಿ ಸೋತು ಸುಣ್ಣವಾಗಿದ್ದ ಭಾರತ ಮತ್ತೂಂದೆಡೆ ಭೀಕರ ಆಹಾರ ಕ್ಷಾಮದೆಡೆ ಮುಖ ಮಾಡಿತ್ತು. ಇಂಥ ಸಂಕಷ್ಟ ಪರಿಸ್ಥಿತಿಯಲ್ಲಿ ಭಾರತದ ಪ್ರಧಾನಿಯಾಗಿ ತಮ್ಮ ದಿಟ್ಟ ನಿಲುವು ಗಳಿಂದ ದೇಶದ ಸಮಗ್ರತೆ ಕಾಪಾಡಿದ ಕೀರ್ತಿ ಶಾಸ್ತ್ರಿಯವರಿಗೆ ಸಲ್ಲುತ್ತದೆ.
ಸತ್ಯಪರತೆ, ದೃಢತೆ, ಪರಿಶ್ರಮ, ಅಚಲ ಸಂಕಲ್ಪ, ನಿಸ್ಪೃಹ ಮನೋಭಾವ, ಪ್ರಾಮಾಣಿಕತೆ ಮತ್ತು ಸರಳತೆ- ಈ ಪದಗಳು ಭಾರತದ ಎರಡನೆಯ ಪ್ರಧಾನಿಯಾದ ಲಾಲ್ ಬಹದ್ದೂರ್ ಶಾಸ್ತ್ರಿಯವರನ್ನು ವ್ಯಾಖ್ಯಾನಿಸುತ್ತವೆ ಮತ್ತು ಅವರ ಜೀವನದ ಕನ್ನಡಿಯಲ್ಲಿ ಹಲವು ಬಾರಿ ಪ್ರತಿಫಲಿಸಿವೆ.

ಶಾಸ್ತ್ರಿಯವರ ಸರಳತೆಗೆ, ಗುಣ ಶ್ರೇಷ್ಠತೆಗೆ ಕನ್ನಡಿ ಹಿಡಿಯುವ ಅವರ ಜೀವನದ ಕೆಲವು ಘಟನೆಗಳು ಇಲ್ಲಿವೆ.
*ಮಹಿಳಾ ಸಬಲೀಕರಣ ಅಂಬೆ ಗಾಲಿಡುತ್ತಿದ್ದ ಆ ದಿನಗಳಲ್ಲಿ ಶಾಸ್ತ್ರಿಯವರು ಮಹಿಳೆಯರ ಸಶಕ್ತೀಕರಣಕ್ಕಾಗಿ ಹಲವು ಕ್ರಮ ಕೈಗೊಂಡರು. ರೈಲ್ವೇ ಮತ್ತು ಸಾರಿಗೆ ಸಚಿವರಾಗಿ ದಿಲ್ಲಿಯ ಬಸ್ಸುಗಳಲ್ಲಿ ಮಹಿಳಾ ಕಂಡಕ್ಟರ್‌ಗಳನ್ನು ನೇಮಿಸಿದರು.
* ಭ್ರಷ್ಟಾಚಾರದ ಕರಾಳ ಪರಿಣಾಮಗಳನ್ನು ಅಂದೇ ಊಹಿಸಿ, ಅದರ ಕಬಂಧ ಬಾಹುಗಳನ್ನು ಕಟ್ಟಿಹಾಕಲು ದೇಶದಲ್ಲೇ ಮೊದಲ ಬಾರಿಗೆ ಶಾಸ್ತ್ರಿಯವರು ತಮಿಳುನಾಡಿನ ಪ್ರಸಿದ್ಧ ರಾಜಕಾರಣಿ ಮತ್ತು ವಕೀಲರಾಗಿದ್ದ ಕೆ. ಸಂತಾನಂ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದರು. ಇಂದಿಗೂ ಸಂತಾನಂ ವರದಿಯನ್ನು ಕಪ್ಪು ಹಣದ ಅಧ್ಯಯನ ಪ್ರಕ್ರಿಯೆಯಲ್ಲಿ ಒಂದು ಮೈಲುಗಲ್ಲು ಎಂದೇ ಪರಿಗಣಿಸಲಾಗುತ್ತದೆ.
* ವರದಕ್ಷಿಣೆ ಎಂಬುದು ಸರ್ವ ಸಾಮಾನ್ಯ ಎಂಬಂತಿದ್ದ 1920-30ರ ಕಾಲದಲ್ಲಿ ಶಾಸ್ತ್ರಿಯವರು ವರದಕ್ಷಿಣೆ ತೆಗೆದುಕೊಳ್ಳಲು ನಿರಾಕರಿಸಿ, ಕೇವಲ ಒಂದು ಚರಕ ಮತ್ತು ಗೇಣುದ್ದದ ಖಾದಿ ಬಟ್ಟೆಯನ್ನು ಮಾತ್ರ ಸ್ವೀಕರಿಸಿ ಇತರರಿಗೆ ಆದರ್ಶಪ್ರಾಯರಾದರು.
*1930ರ ದಂಡಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಶಾಸ್ತ್ರಿಯವರು ಜೈಲು ಸೇರಿದ ಸಂದರ್ಭ. ಅದೇ ಸಮಯಕ್ಕೆ ಅವರ ಪುತ್ರಿಯ ಅಕಾಲಿಕ ಮರಣದ ವಾರ್ತೆ ತಿಳಿದಾಗ, ಜೈಲಿನ ಅಧಿಕಾರಿ ಅವರನ್ನು 15 ದಿನಗಳ ಜಾಮೀನಿನ ಮೇಲೆ ಬಿಡುಗಡೆ ಮಾಡಿದರು.
ಶಾಸ್ತ್ರಿಯವರು ಪುತ್ರಿಯ ಅಂತ್ಯಸಂಸ್ಕಾರ ಮುಗಿಸಿ, ಜಾಮೀನಿನ ಅವಧಿ ಮುಗಿಯಲು ಇನ್ನೂ ಹಲವು ದಿನಗಳು ಬಾಕಿ ಇರುವಾಗಲೇ ಜೈಲಿಗೆ ವಾಪಸಾಗಿ, ತಮ್ಮ ಪ್ರಾಮಾಣಿಕತೆ ಮತ್ತು ದೇಶಭಕ್ತಿಯನ್ನು ತೋರ್ಪಡಿಸಿದರು.
ಹೀಗೆ ಶಾಸ್ತ್ರಿಯವರ ಬದುಕಿನ ಇಂತಹ ಅನೇಕ ಸಂಗತಿಗಳು ಅವರ ಸರಳತೆ ಮತ್ತು ವ್ಯಕ್ತಿತ್ವದ ದಿಗªರ್ಶನವನ್ನೇ ಮಾಡಿಸುತ್ತವೆ. ಅವರನ್ನು ಮರೆಯದಿರೋಣ.
No comments:
Post a Comment